ಪಂಕಜ್ ಮಲಿಕ್
	1905-1978 ಖ್ಯಾತ ಸಂಗೀತ ತಜ್ಞ. ಚಲನಚಿತ್ರ ಸಂಗೀತ ನಿರ್ದೇಶಕ. ಫಾಲ್ಕೆ ಪ್ರಶಸ್ತಿ ವಿಜೇತ. ಸಂಪ್ರದಾಯಶೀಲ ಕುಟುಂಬದಲ್ಲಿ ಜನಿಸಿದ ಈತನ ಸಂಗೀತಲಾಲಸೆಗೆ ಮನೆಯವರ ಪ್ರೋತ್ಸಾಹ ಸಿಗಲಿಲ್ಲ. ಹನ್ನೊಂದನೆಯ ವಯಸ್ಸಿನಲ್ಲಿ ಐದನೆಯ ಜಾರ್ಜ್‍ನ ಕಿರೀಟ ಧಾರಣೆಯ ಸಮಾರಂಭವೊಂದರಲ್ಲಿ ಸಾರ್ವಜನಿಕವಾಗಿ ಹಾಡಿದ ಸಂದರ್ಭ ಈತನಿಗೆ ಸ್ಫೂರ್ತಿತುಂಬಿತು. ಶಾಲಾ ಕಾಲೇಜಿನ ಜೀವನದ ಉದ್ದಕ್ಕೂ ಸಂಗೀತ ಶ್ರದ್ಧೆ ಉಳಿದೇ ಬಂತು. ಸ್ವಂತ ಪ್ರಯತ್ನದಿಂದಲೆ ಲಘುಸಂಗೀತವನ್ನು ಅಭ್ಯಾಸಮಾಡಿದ. ಪಂಡಿತ ವಿಶ್ವನಾಥರಾವ್ ಅವರ ಶಿಷ್ಯರಾದ ದುರ್ಗಾದಾಸ್ ಬ್ಯಾನರ್ಜಿ ಎಂಬ ಶಾಸ್ತ್ರೀಯ ಸಂಗೀತದ ವಿದ್ವಾಂಸರು ಗುರುಗಳಾಗಿ ದೊರೆತರು. ಅದೇ ಕಾಲಕ್ಕೆ ಧೀರೇಂದ್ರನಾಥ ಠಾಕೂರ್ ಮತ್ತು ಸ್ವತಃ ಗುರುದೇವ ರವೀಂದ್ರನಾಥ ಠಾಕೂರರಿಂದಲೇ ರವೀಂದ್ರ ಸಂಗೀತದ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಈತನ ಹಾಡುಗಾರಿಕೆಯ ಸಾಮಥ್ರ್ಯ ಹಾಗೂ ಹಿಂದಿ ಮತ್ತು ಬಂಗಾಳಿಯ ಭಿನ್ನಬಗೆಯ ಭಾವಗೀತೆಗಳಿಗೆ ರಾಗಸಂಯೋಜನ ಚಾತುರ್ಯಗಳನ್ನು ಸಾರಸ್ವತ ಮಹಾಮಂಡಲ ಸಂಸ್ಥೆ ಗುರ್ತಿಸಿ ಈತನಿಗೆ ಸೂರ್‍ಸಾಗರ್ ಪ್ರಶಸ್ತಿ ನೀಡಿತು (1932).

	ಚಿಕ್ಕಂದಿನಲ್ಲಿಯೇ ಈತ ಚಿಕ್ಕಪ್ಪನ ನಾಟಕ ರೂಪಕ ಪನ್ನಾಕೆ ಸಂಗೀತ ಸಂಯೋಜನೆ ಮಾಡಿದ್ದ. 1927ರಲ್ಲಿ ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಕಂಪನಿ (ಆಮೇಲೆ ಇದಕ್ಕೆ ಆಲ್ ಇಂಡಿಯಾ ರೇಡಿಯೊ ಎಂದು ಹೆಸರಾಯಿತು) ಆರಂಭವಾದಾಗಿನಿಂದ ಅದರೊಡನೆ ಸಂಪರ್ಕವಿಟ್ಟುಕೊಂಡಿದ್ದು ರವೀಂದ್ರ ಸಂಗೀತವನ್ನು ಅತ್ಯಂತ ಜನಪ್ರಿಯಗೊಳಿಸಿದ. ಇಂಟರ್‍ನ್ಯಾಷನಲ್ ಫಿಲ್ಮ್ ಕ್ಯ್ರಾಫ್ಟ್ಸ್‍ಸಂಸ್ಥೆ ತಯಾರಿಸಿದ ಕಷೇರ್ ಮಾಯೆ ಹಾಗೂ ಚೋರೆ ಕಾಂತಾ ಎಂಬ ಮೂಕಚಿತ್ರಗಳಿಗೆ 1928-29ರ ಅವಧಿಯಲ್ಲಿ ಚಿತ್ರಸಂಗೀತ ನಿರ್ದೇಶನ ಮಾಡಿದ. ಅನಂತರ ನ್ಯೂ ತಿಯೇಟರ್ಸ್ ಲಿಮಿಟೆಡ್ ಎಂದು ಹೆಸರಾದ ಈ ಸಂಸ್ಥೆಯ ಇಬ್ಬರು ಸಂಗೀತ ನಿರ್ದೇಶಕರಲ್ಲಿ ಈತ ಒಬ್ಬ.

	ಚಿತ್ರಸಂಗೀತದ ಆದ್ಯ ನಿರ್ದೇಶಕರಲ್ಲಿ ಒಬ್ಬನೆನಿಸಿದ ಈತನ ಕೊಡುಗೆ ಅಪಾರ ಸುಲಲಿತ, ದಕ್ಷ, ಹಾಗೂ ಕಳಂಕರಹಿತ ಛಾಯಾಗ್ರಹಣಕ್ಕೆ ಪೂರಕವಾಗುವಂತೆ ಅಪ್ಯಾಯಮಾನ ಸಂಗೀತ ನೀಡುವುದರ ಅಗತ್ಯವನ್ನು ಈತ ಮೊದಲು ಗುರುತಿಸಿದ. ತಾಂತ್ರಿಕ ಕಾರ್ಯಕ್ಕೆ ಸಂಗೀತ ಪೂರಕವಾಗಿ ಚಿತ್ರದ ಒಟ್ಟು ಪರಿಣಾಮ ಹೆಚ್ಚುವುದೆಂಬುದನ್ನು ತೋರಿಸಿಕೊಟ್ಟ. ಕಥಾ ಸನ್ನಿವೇಶಗಳಿಗೆ ಅನುಗುಣವಾಗಿ ಹಿನ್ನೆಲೆ ಸಂಗೀತವನ್ನು ಸರಿಯಾದ ಅರ್ಥದಲ್ಲಿ ನೀಡುವ ತಂತ್ರವನ್ನು ರೂಪಿಸಿದ ಪಿ.ಸಿ. ಬರೂವ ನಿರ್ಮಿಸಿದ ಮುಕ್ತಿ ಚಿತ್ರದಲ್ಲಿ ಪ್ರಥಮ ಬಾರಿಗೆ ತಬಲ ವಾದ್ಯದ ನೆರವಿನಿಂದ ರವೀಂದ್ರ ಸಂಗೀತವನ್ನು ಅಳವಡಿಸಿದ.

	ಅಪ್ರತಿಮ ಗಾಯಕ ಸೈಗಾಲನನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟ ಕೀರ್ತಿ ಇವನದು. ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಕಂಪನಿಯ ಕಲ್ಕತ್ತ ಕೇಂದ್ರದಲ್ಲಿ ಈತ ಗಾಯನ ಶಿಕ್ಷಕನಾಗಿದ್ದ ಕಾಲದಲ್ಲಿ ಸೈಗಾಲನ ಪರಿಚಯವಾಯಿತು. ಕೂಡಲೆ ಸುಖ್ ಕಾಂತರ ಚಿತ್ರದಲ್ಲಿ ಆತನಿಗೆ ಪ್ರವೇಶ ಸಿಕ್ಕಿತು. ಪಂಕಜನ ಸಂಗೀತ ನಿರ್ದೇಶನದಲ್ಲಿ ಸೈಗಾಲ್ ಹಾಡಿರುವ ಅತ್ಯುತ್ತಮ ಗೀತಗಳಿರುವ ಚಿತ್ರಗಳೆಂದರೆ ಮೈ ಸಿಸ್ಟರ್, ದುಷ್ಮನ್, ಧರ್ತಿಮಾತಾ, ಭಾಗ್ಯಚಕ್ರ (ಬಂಗಾಲಿ) ದೇಶರ್ ಮಾತಿ(ಬಂಗಾಲಿ), ಪಂಕಜನ ಪ್ರಕಾರ ಗೀತ್ (ಹಿಂದಿ) ಹಾಗೂ ಅಧಿಕಾರ್ (ಬಂಗಾಳಿ) ಚಿತ್ರಗಳಲ್ಲಿ ಈತ ನೀಡಿರುವ ಸಂಗೀತ ಅತ್ಯುತ್ತಮವಾದದ್ದು. ಕಪಾಲ ಕುಂಡಲ ಚಿತ್ರದ ಅತ್ಯಂತ ಜನಪ್ರಿಯವಾಗಿರುವ ಪಿಯಾ ಮಿಲನ್ ಕೊಜಾನಾ ಎಂಬ ಗೀತೆ ಇನ್ನೂ ರಸಿಕರ ಮನಸೆಳೆಯುತ್ತಿದೆ. ಪಂಕಜ್ ಇಂದು ಚಿತ್ರರಂಗದಿಂದ ದೂರವಾಗಿದ್ದರೂ ರಂಗಭೂಮಿಯಲ್ಲಿ ಕೆಲವು ನೃತ್ಯನಾಟಕಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾನೆ; ಪಶ್ಚಿಮ ಬಂಗಾಳ ಸರ್ಕಾರದ ಗೃಹ ಇಲಾಖೆಯ (ಪ್ರಚಾರ) ಜನಪದ ಮನರಂಜನಾ ವಿಭಾಗದ ಸಲಹಾಗಾರನಾಗಿದ್ದಾನೆ. ಗೀತಾವಲ್ಲಕಿ, ಸ್ವರಲಿಪಿಕಾ, ಮಹಿಷಾಸುರ ಮರ್ದಿನಿ ಮತ್ತು ರಾಗಲಕ್ಷಣ ಗೀತಮರಾಲಿ ಎಂಬ ನಾಲ್ಕು ಸಂಗೀತಶಾಸ್ತ್ರ ಕೃತಿಗಳನ್ನು ಪ್ರಕಟಿಸಿದ್ದಾನೆ. ಮೊದಲ ಮೂರು ಕೃತಿಗಳಲ್ಲಿನ ಬಹುತೇಕ ಹಾಡುಗಳ ರಾಗಗಳು ಆಧುನಿಕ ತಂತ್ರದವು. ಕೊನೆಯದರ ರಾಗಗಳು ಶಾಸ್ತ್ರೀಯ ಸಂಗೀತ ತಳಹದಿಯವು. ಚಿತ್ರರಂಗಕ್ಕೆ ಈತ ಸಲ್ಲಿಸಿರುವ ಸೇವೆಯನ್ನು ಪುರಸ್ಕರಿಸಿ ಕೇಂದ್ರ ಸರ್ಕಾರ 1977ರ ಫಾಲ್ಕೆ ಪ್ರಶಸ್ತಿಯನ್ನು ಈತನಿಗೆ ನೀಡಿದೆ.												(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ